ಶನಿವಾರ, ಏಪ್ರಿಲ್ 17, 2021

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷಾ ಸಿದ್ಧತೆ ಹೀಗೆ ಮಾಡಿ? - ಡಾ. ಸಿ.ಆರ್.ಚಂದ್ರಶೇಖರ್

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷಾ ಸಿದ್ಧತೆ ಹೀಗೆ ಮಾಡಿ?

- ಡಾ. ಸಿ.ಆರ್.ಚಂದ್ರಶೇಖರ್,

 

( ಆತ್ಮೀಯ ಶಿಕ್ಷಕರೇ, ಪರೀಕ್ಷಾ ತಯಾರಿಗಾಗಿ ಮಕ್ಕಳಿಗೆ ಈ ಮಾಹಿತಿಗಳನ್ನು ತಿಳಿಸಿ ಅಥವಾ ಓದಿ ಹೇಳಿ. -ಸಂ)

ಪರೀಕ್ಷಾ ಸಿದ್ಧತೆಯನ್ನು ಹೀಗೆ ಮಾಡಿ:

* ಕೋರ್ಸಿನ ಪ್ರಾರಂಭದ ದಿನದಿಂದಲೇ ಮುಂದೆ ಬರುವ ಪರೀಕ್ಷೆಗೆ ಸಿದ್ಧತೆ ಮಾಡಿ ಶೈಕ್ಷಣಿಕ ವರ್ಷದ ಕೊನೆಗೆ ಸಿದ್ಧತೆ ಪ್ರಾರಂಭಿಸಿದರೆ, ಸಮಯ ಸಾಲುವುದಿಲ್ಲ. ಟೆನ್ಷನ್ ಹೆಚ್ಚುತ್ತದೆ.

* ಪರೀಕ್ಷೆಗೆ ಇರುವ ವಿಷಯಗಳನ್ನು ಕ್ರಮಬದ್ಧವಾಗಿ ಓದಿ. ಓದಿ ಅರ್ಥ ಮಾಡಿಕೊಳ್ಳಿ. ಅರ್ಥವಾಗದ ವಿಷಯಗಳನ್ನು ಶಿಕ್ಷಕರಿಂದ ಸಹಪಾಠಿಗಳಿಂದ ಕೇಳಿ ಅರ್ಥ ಮಾಡಿಕೊಳ್ಳಿ. ಇಸವಿ/ ಹೆಸರು/ ಸೂತ್ರಗಳನ್ನು ಹೊರತುಪಡಿಸಿ ಯಾವುದನ್ನೂ ಬಾಯಿಪಾಠ ಮಾಡಲು ಹೋಗಬೇಡಿ.

 * ಓದಿದ್ದನ್ನು ನೆನಪಿಸಿಕೊಳ್ಳಿ ತಕ್ಷಣ ಮತ್ತು ಆನಂತರ, ಅಂದರೆ ಇಂದು ಓದಿದ್ದನ್ನು ಮತ್ತು ಹಿಂದೆ (ನಿನ್ನೇದಿನ) ತಿಂಗಳ ಹಿಂದೆ ಓದಿದ್ದನ್ನು ನೆನಪಿಸಿಕೊಳ್ಳಿ. ಯಾವುದು ಮರೆಯುತ್ತದೆ ಅದನ್ನು ಮತ್ತೆ ಓದಿ (ರಿಪೀಟ್)

* ಓದಿದ ವಿಷಯಗಳನ್ನು ಸಹಪಾಠಿಗಳ ಜೊತೆಗೆ ಚರ್ಚಿಸಿ. ಇನ್ನೊಬ್ಬರಿಗೆ ಪಾಠ ಮಾಡಿ. ಇನ್ನೊಬ್ಬರಿಗೆ ಕಲಿಸುವಾಗ ನಿಮಗೆ ವಿಷಯ ನಿಖರವಾಗಿ ಮನದಟ್ಟಾಗುತ್ತದೆ.

 * ಪರೀಕ್ಷೆಯ ಪ್ರಶ್ನೆಗಳನ್ನು (ಹಳೆಯ ಪ್ರಶ್ನೆಪತ್ರಿಕೆಗಳಿಂದ, ಪ್ರಶ್ನೆ ಬ್ಯಾಂಕಿನಿಂದ ನಿಮ್ಮ ಸ್ನೇಹಿತರ ಊಹೆಯಿಂದ ಸಂಗ್ರಹಿಸಿ. ನಿತ್ಯ ಐದೈದು ಪ್ರಶ್ನೆಗಳಿಗೆ ವೇಳಾಮಿತಿಯೊಳಗೆ ಉತ್ತರಗಳನ್ನು ಬರೆಯಿರಿ. ಐದು ಅಂಕಗಳ ಪ್ರಶ್ನೆಗೆ ಹೇಗೆ ಮತ್ತು ಎಷ್ಟು ಉತ್ತರ, ಎರಡು ಅಥವಾ ಮೂರು ಅಂಕಗಳ ಪ್ರಶ್ನೆಗಳಿಗೆ ಹೇಗೆ ಮತ್ತು ಎಂಥಾ ಉತ್ತರ ಹೆಚ್ಚು ಅಂಕಗಳನ್ನು ಪಡೆಯಬಲ್ಲದು ಎಂದು ಸಹಪಾಠಿಗಳಿಂದ ಶಿಕ್ಷಕರಿಂದ ತಿಳಿಯಿರಿ.

 * ನಿಮ್ಮ ಹ್ಯಾಂಡ್ ರೈಟಿಂಗ್ ಸ್ಫುಟವಾಗಿರಲು ವೇಗವಾಗಿ ಬರೆದರೂ ಅದನ್ನು ಓದಲು ಯೋಗ್ಯವಾಗಿರುವಂತೆ ಮಾಡಲು ಬರೆದು ಪ್ರಾಕ್ಟೀಸ್ ಮಾಡಿ, ವ್ಯಾಕರಣ ದೋಷಗಳಿರಬಾರದು. ಚಿಕ್ಕ ವಾಕ್ಯಗಳಲ್ಲಿ ಸರಳ ಭಾಷೆಯನ್ನು ಬಳಸಿ

* ಎಲ್ಲಾ ಅಧ್ಯಾಯಗಳನ್ನೂ ಓದಿ ಯಾವುದನ್ನೂ ಬಿಡಬೇಡಿ.

 * ಸಂಭವನೀಯ ಪ್ರಶ್ನೆಗಳಿಗೆ ಹೆಚ್ಚು ಆದ್ಯತೆ ನೀಡಿದರೂ ಉಳಿದ, ಅಸಂಭವನೀಯ ಪ್ರಶ್ನೆಗಳಿಗೂ ಗಮನ ಕೊಡಿ.

ಓದದೇ/ಮನನ ಮಾಡದೇ, ಯಾವ ಅಧ್ಯಾಯವನ್ನೂ ಬಿಡಬೇಡಿ.

 * ಪರೀಕ್ಷೆ ಸಮೀಪಿಸುತ್ತಿದ್ದಂತೆ ಹೆಚ್ಚು ಸಲ ರಿವೈಸ್ ಮಾಡಿ.

* ಟೆಸ್ಟ್, ಪರೀಕ್ಷೆಗಳ ಮಾರ್ಕ್ಸ್ ನ್ನು ತೆಗೆದುಕೊಳ್ಳಿ. ನಿಮ್ಮ ನಿರ್ವಹಣೆಯನ್ನು ವಿಶ್ಲೇಷಿಸಿ. ಕಡಿಮೆ ಮಾರ್ಕ್ಸ್ ಬಂದರೆ ಏಕಾಯಿತು? ಏನಾಯಿತೆಂದು ಗಮನಿಸಿ. ಆದ ತಪ್ಪುಗಳನ್ನು ನ್ಯೂನತೆಗಳನ್ನು ತಿದ್ದಿಕೊಳ್ಳಿ.

* ದಿನಕ್ಕೆ ಎಷ್ಟು ಗಂಟೆಗಳ ಕಾಲ ಓದಬೇಕೆಂಬುದನ್ನು ನೀವೇ ನಿರ್ಧರಿಸಿ.

* ಓದುವಾಗ ಮಧ್ಯೆ ಮಧ್ಯೆ ರಿಲ್ಯಾಕ್ಸ್ ಮಾಡಿ. ಸಂಗೀತ, ವಾಕಿಂಗ್, ಮನೆಗೆಲಸ, ದೇವರ ಧ್ಯಾನ, ಯೋಗ, ಪ್ರಾಣಾಯಾಮ, ಒಳಾಂಗಣ ಕ್ರೀಡೆಗಳು ರಿಲ್ಯಾಕ್ಸ್ ಆಗಲು ಸಹಾಯಕಾರಿ. ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ.

 * ಸುಲಭವಾಗಿ ಜೀರ್ಣವಾಗುವ ಪುಷ್ಟಿದಾಯಕ ಆಹಾರವನ್ನು ಸಮಯಕ್ಕೆ ಸರಿಯಾಗಿ ಸೇವಿಸಿ. ಉಪವಾಸವೂ ಬೇಡ ಅತಿಯಾಗಿ ತಿನ್ನುವುದೂ ಬೇಡ. ಹೊರಗೆ ತಿನ್ನಬೇಡಿ.

* ನಿತ್ಯ ವ್ಯಾಯಾಮ/ ವಾಕಿಂಗ್ ಜಾಗಿಂಗ್, ಉತ್ತಮ ದೈಹಿಕ ಸ್ವಚ್ಛತೆಯನ್ನು ಕಾಪಾಡಿ.

* ಮನಸ್ಸನ್ನು ಪ್ರಶಾಂತವಾಗಿಟ್ಟುಕೊಳ್ಳಿ.

* ಯಾವ ವಿಷಯ ಸಮಸ್ಯೆಯ ಬಗ್ಗೆ ಹೆಚ್ಚು ಚಿಂತೆ ಬೇಡ. ಮನೆಯವರ ನೆರವಿನಿಂದ, ಸಮಸ್ಯಾ ಪರಿಹಾರಕ್ಕೆ ಅಥವಾ ಸಮಸ್ಯೆಯೊಂದಿಗೆ ಬದುಕಲು ಕಲಿಯಿರಿ. * ತೃಪ್ತಿಯಿಂದಿರಿ, ಸಮಾಧಾನ ಚಿತ್ತರಾಗಿರಿ.

* ಅತಿ ಆಸೆ, ಆಕಾಂಕ್ಷೆಗಳಿಗೆ ಲಗಾಮು ಹಾಕಿ. ಸರಳವಾಗಿ ಬದುಕಿ. ವೈಭೋಗ ಸುಖದಾಯಕ ವಸ್ತುಗಳ ಬಗ್ಗೆ ಗಮನ ಹರಿಸಬೇಡಿ.

* ಮೊಬೈಲ್, ಟೀವಿ. ಇಂಟರ್ನೆಟ್, ಫೇಸ್ಬುಕ್ ವಾಟ್ಸಾಪ್ಗಳನ್ನು ಮಿತವಾಗಿ ಬಳಸಿ ದುರ್ಬಳಕೆ ಬೇಡ.

* ಶಿಸ್ತು, ಸಂಯಮಗಳನ್ನು ಮೈಗೂಡಿಸಿಕೊಳ್ಳಿ. ಮನಸ್ಸಿನೊಳಗೆ ಮೂಡುವ ಭಯ, ದುಃಖ, ಕೋಪ, ಮತ್ಸರಗಳನ್ನು ಆತ್ಮೀಯರೊಂದಿಗೆ ಹೇಳಿಕೊಳ್ಳಿ.

 * ಆದಷ್ಟು ಸಂತೋಷ, ನೆಮ್ಮದಿಯಿಂದ ಇರಿ. ದಿನಕ್ಕೆ ಐದಾರು ಗಂಟೆಗಳ ಕಾಲ ನಿದ್ರೆ ಮಾಡಿ. ಒಳ್ಳೆಯ ನಿದ್ರೆ ಆರೋಗ್ಯಕ್ಕೆ ಅಗತ್ಯ.

 

 

 ಪರೀಕ್ಷೆಯ ಹಿಂದಿನ ದಿನ - ಪರೀಕ್ಷಾ ದಿನ

* ಪರೀಕ್ಷೆಗೆ ಸೂಕ್ತವಾದ ಸಿದ್ಧತೆ ಮಾಡಿದ್ದೇನೆ. ನಾಳೆಯಿಂದ ಪರೀಕ್ಷೆ ಪ್ರಾರಂಭವಾಗುತ್ತದೆ. ನಾನು ಚೆನ್ನಾಗಿ ಬರೆಯಬಲ್ಲೆ, ಒಳ್ಳೆಯ ಅಂಕಗಳನ್ನು ಪಡೆಯಬಲ್ಲೆ ಎಂಬ ಆತ್ಮವಿಶ್ವಾಸವಿರಲಿ.

* ಪರೀಕ್ಷೆಯಲ್ಲಿ ಯಾರು ಹೇಗೆ ಮಾಡುತ್ತಾರೆ? ಅವರೊಂದಿಗೆ ನಾನು ಸ್ಪಧರ್ಿಸಬಲ್ಲೆನೆ, ನಾನು ಹಿಂದುಳಿಯುವೆನೇ ಎಂಬ ನೆಗೆಟಿವ್ ಆಲೋಚನೆ ಬೇಡ. ನಿಮ್ಮ ಪಾಡು ನಿಮ್ಮದು.

* ಓದಿದ ವಿಷಯಗಳನ್ನು ಹಿಂದಿನ ದಿನ ರೀಕಾಲ್ ಮಾಡಲು ಪ್ರಯತ್ನಿಸಬೇಡಿ. ಏಕೆಂದರೆ ರೀಕಾಲ್ ಮಾಡಲು ಪ್ರಯತ್ನಿಸಿ, ಯಾವ ವಿಷಯವದರೂ ರೀಕಾಲ್ ಆಗದಿದ್ದರೆ ಆತಂಕ ಉಂಟಾಗುತ್ತದೆ.

* ನಿಮ್ಮ ಚಿಕ್ಕ ನೋಟ್ಸ್ ಅಥವಾ ಬುಲೆಟ್ ಪಾಯಿಂಟ್ಸ್ಗಳನ್ನು ರಿವೈಸ್ ಮಾಡಿ.

* ಯಾವುದೇ ಹೊಸ ವಿಷಯ ಅಥವಾ ಬಿಟ್ಟ ವಿಷಯವನ್ನು ಕಲಿಯಲು ಹೋಗಬೇಡಿ.

* ಪ್ರಶ್ನೆಗಳು ಯಾವುದು ಬರುವುದು ಯಾವುದು ಬರುವುದಿಲ್ಲ ಎಂದು ಊಹೆ ಮಾಡುವುದಾಗಲೀ, ನಿಮ್ಮ ಸ್ನೇಹಿತರೊಂದಿಗೆ ಚರ್ಚಿಸುವುದಾಗಲೀ ಮಾಡಬೇಡಿ. ಏಕೆಂದರೆ ಯಾವುದೋ ಪ್ರಶ್ನೆ ಬರಬಹುದೆಂದು ನಿಮ್ಮ ಸಹಪಾಠಿ ಹೇಳುವುದು, ನೀವು ಅದನ್ನು ಸರಿಯಾಗಿ ಅಧ್ಯಯನ ಮಾಡಿಲ್ಲ ಎಂದುಕೊಳ್ಳುವುದು ಭಯವನ್ನು ತರಿಸುತ್ತದೆ.

* ಪರೀಕ್ಷೆಯ ಹಾಲಿಗೆ ತೆಗೆದುಕೊಂಡು ಹೋಗಬೇಕಾದ ಗುರುತಿನ ಪತ್ರ, ಚೆನಾಚ್ನಿಗಿ ಬರೆಯುವ ಪೆನ್ನುಗಳು, ಪೆನ್ಸಿಲ್, ರಬ್ಬರ್, ಇತ್ಯಾದಿ ಪರಿಕರಗಳನ್ನು ಜೋಡಿಸಿ ಬ್ಯಾಗಿನಲ್ಲಿಟ್ಟುಕೊಳ್ಳಿ.

* ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸಿ, ರಾತ್ರಿ ಹತ್ತು ಗಂಟೆಯೊಳಗೆ ಮಲಗಿ ನಿದ್ದೆ ಮಾಡಿ.

 

ಪರೀಕ್ಷಾ ದಿನ

* ಬರಹವಿರುವ ಯಾವುದೇ ಚೀಟಿಗಳು ನಿಮ್ಮ ಜೇಬಿನಲ್ಲಿ ಇಲ್ಲದಿರುವಂತೆ ನೋಡಿಕೊಳ್ಳಿ. ಈದಿನ ನಾನು ಚೆನ್ನಾಗಿ ಪರೀಕ್ಷೆ ಬರೆದು ಹೆಚ್ಚಿನ ಮಾಕ್ಸರ್್ಗಳನ್ನು ತೆಗೆಯಬಲ್ಲೆ. ದೇವರ ಹಿರಿಯರ ಆಶೀವರ್ಾದ ನನ್ನ ತಲೆಯ ಮೇಲಿದೆ. ಶ್ರಮಪಟ್ಟು ಕ್ರಮಬದ್ಧವಾಗಿ ನಡೆಸಿದ ಪರೀಕ್ಷಾ ಸಿದ್ಧತೆ ನನ್ನ ಬೆನ್ನಿಗಿದೆ ಎಂದು ಹೇಳಿಕೊಳ್ಳಿ.

* ಪರೀಕ್ಷಾ ಹಾಲ್ ಅನ್ನು ಅರ್ಧ ಗಂಟೆ ಮುಂಚಿತವಾಗಿಯೇ ತಲುಪುವಂತೆ ವ್ಯವಸ್ಥೆ ಮಾಡಿಕೊಳ್ಳಿ. ಸಮಯಕ್ಕೆ ಮುಂಚಿತವಾಗಿಯೇ ಮನೆ ಬಿಡಿ. ಗಡಿಬಿಡಿ ಬೇಡ.

* ಪರೀಕ್ಷಾ ಸ್ಥಳವನ್ನು ತಲುಪಿದ ಮೇಲೆ ಮೊದಲ ದಿನವಾದರೆ ನಿಮ್ಮ ಕೊಠಡಿ ಯಾವುದು, ನಿಮ್ಮ ರೋಲ್ ನಂಬರಿರುವ ಮೇಜು ಗುರುತಿಸಿ. ಯಾವುದೇ ಬೆಲೆಬಾಳುವ ವಸ್ತು, ಮೊಬೈಲ್ ಕ್ಯಾಲ್ಕ್ಯುಲೇಟರ್ಗಳನ್ನು ಒಯ್ಯದಿರುವುದೇ ಒಳ್ಳೆಯದು. ಕೈಗಡಿಯಾರ ನೀರಿನ ಬಾಟೆಲ್ ನಿಮ್ಮ ಜೊತೆಯಲ್ಲಿರಲಿ. ಮೂತ್ರ ವಿಸರ್ಜನೆ ಮಾಡಿ ಪರೀಕ್ಷಾ ಕೊಠಡಿಯಲ್ಲಿ ಕುಳಿತುಕೊಳ್ಳಿ.

* ಪ್ರಶ್ನೆ ಪತ್ರಿಕೆ ಕೈಗೆ ಬಂದ ಮೇಲೆ ಎಲ್ಲಾ ಪ್ರಶ್ನೆಗಳನ್ನೂ ನಿಧಾನವಾಗಿ ಓದಿಕೊಳ್ಳಿ. ಕಡ್ಡಾಯವಾಗಿ ಉತ್ತರಿಸಬೇಕಾದ ಪ್ರಶ್ನೆ ಯಾವುದು? ಯಾವ ಪ್ರಶ್ನೆಗೆ ಎಷ್ಟು ಅಂಕಗಳನ್ನಿಟ್ಟಿದ್ದಾರೆ ಗಮನಿಸಿ. ಎಲ್ಲಾ ಸೂಚನೆಗಳನ್ನೂ ಸರಿಯಾಗಿ ಓದಿ.

* ಪ್ರಶ್ನೆಗಳನ್ನು ಮೂರು ಗುಂಪು ಮಾಡಿ. ಗುಂಪು 1: ಉತ್ತರ ಚೆನ್ನಾಗಿ ಗೊತ್ತಿರುವಂಥವು. 2. ಸುಮಾರಾಗಿ ಉತ್ತರ ಗೊತ್ತಿರುವಂತಹ ಪ್ರಶ್ನೆಗಳು 3. ಕಷ್ಟದ ಅಥವಾ ಉತ್ತರ ಸರಿಯಾಗಿ ಗೊತ್ತಿಲ್ಲದಂತಹ ಪ್ರಶ್ನೆಗಳು.

 

ಮೊದಲು ಚೆನ್ನಾಗಿ ಉತ್ತರ ಗೊತ್ತಿರುವ ಪ್ರಶ್ನೆಗಳಿಗೆ ನಿಧಾನವಾಗಿ, ಸ್ಫುಟವಾಗಿ, ಚಿತ್ತಿಲ್ಲದೆ ಬರೆಯಿರಿ. ಚಿತ್ರ, ಟೇಬಲ್ಗಳನ್ನು, ಮುಖ್ಯಾಂಶಗಳಿಗೆ ಗೆರೆಯನ್ನು ಹಾಕಿ. ನಂತರ ಎರಡನೆಯ ಗುಂಪಿನ ಪ್ರಶ್ನೆಗಳಿಗೆ, ಕೊನೆಯಲ್ಲಿ ಉತ್ತರ ಸರಿಯಾಗಿ ಗೊತ್ತಿಲ್ಲದ ಪ್ರಶ್ನೆಗಳಿಗೆ ಊಹೆ ಮಾಡಿ ಉತ್ತರ ಬರೆಯಿರಿ. ಏನೂ ಬರೆಯದೆ ಖಾಲಿ ಬಿಡಬೇಡಿ.

 

ಯಾವುದೇ ಮಾಹಿತಿ ನಿಖರವಾಗಿ ನೆನಪಿಗೆ ಬರದದ್ದಾಗ, ಗೊಂದಲ ಉಂಟಾದಾಗ, ಶಾಂತರಾಗಿ ಯೋಚಿಸಿ ಗಡಿಬಿಡಿ ಬೇಡ. ಕೊನೆಯಲ್ಲಿ ಪುಟಗಳ ಜೋಡಣೆ ಸರಿಯಾಗಿದೆಯೇ? ಪ್ರಶ್ನೆಗಳ ಸಂಖ್ಯೆ ಸರಿಯಾಗಿ ನಮೂದಿಸಿದ್ದೀರಾ? ನಿಮ್ಮ ರಿಜಿಸ್ಟರ್ ನಂಬರ್ ಸರಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಕಡೆಯ ಬೆಲ್ ಆದ ಮೇಲೆ ಉತ್ತರ ಪತ್ರಿಕೆಯನ್ನು ನೀಡಿ ಹೊರಬನ್ನಿ.

 

ಪರೀಕ್ಷೆ ನಿಮ್ಮ ಮಿತ್ರ, ಶತ್ರುವಲ್ಲ. ಸರಿಯಾದ ಸಿದ್ಧತೆ, ಆತ್ಮವಿಶ್ವಾಸವಿದ್ದರೆ ಪರೀಕ್ಷೆ ಎದುರಿಸುವುದು ಸುಲಭ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಮ್ಮ ಇಲಾಖೆ ನಮ್ಮ ಹೆಮ್ಮೆ

ನಮ್ಮ ಇಲಾಖೆ ನಮ್ಮ ಹೆಮ್ಮೆ

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಯಲ್ಲಾಪುರ
ಕ್ಷೇತ್ರ ಸಂಪನ್ಮೂಲ ಕೇಂದ್ರ ಯಲ್ಲಾಪುರ, ಶಿರಸಿ ಶೈ.ಜಿಲ್ಲೆ.(ಉ.ಕ.)

Translate