ನಮ್ಮ ಇಲಾಖೆ ನಮ್ಮ ಹೆಮ್ಮೆ

ನಮ್ಮ ಇಲಾಖೆ ನಮ್ಮ ಹೆಮ್ಮೆ

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಯಲ್ಲಾಪುರ
ಕ್ಷೇತ್ರ ಸಂಪನ್ಮೂಲ ಕೇಂದ್ರ ಯಲ್ಲಾಪುರ, ಶಿರಸಿ ಶೈ.ಜಿಲ್ಲೆ.(ಉ.ಕ.)

ಕಲಿಕಾ ಫಲ ಆಧಾರಿತ ಪ್ರಶ್ನೆ ಕೋಠಿ

ಶುಕ್ರವಾರ, ಜನವರಿ 10, 2025

ವಿದ್ಯಾರ್ಥಿಯೋರ್ವನ ಶಾಲೆಯ ಪ್ರವಾಸದ ಅನುಭವ ಕಥನ

 

ಶಾಲೆಯ ಪ್ರವಾಸದ ಅನುಭವ

                  ಅಕ್ಟೋಬರ್ ರಜೆ ಮುಗಿದ ಮೇಲೆ ಶಾಲೆಯ ಪ್ರವಾಸ ಎಲ್ಲಿ ಮಾಡಬಹುದೆಂದು ಸ್ನೇಹಿತರೊಡನೆ ಒಂದು ದಿನ ಮಾತನಾಡಿದ್ದೆ. ಪ್ರವಾಸಕ್ಕೆ ಹೋಗಿ ಸುತ್ತಾಡಿ ಬರುವ ಹುಮ್ಮಸ್ಸು ಎಲ್ಲರಲ್ಲೂ ಇತ್ತು. ಒಂದು ದಿನ ನಾನು ನನ್ನ ತರಗತಿಯಲ್ಲಿ ಕುಳಿತಿದ್ದ ಸಮಯದಲ್ಲಿ ಎಲ್ಲಾ ಮಕ್ಕಳನ್ನು ಸಭಾ ಮಂಟಪಕ್ಕೆ ಕರೆದರು. ಎಲ್ಲರೂ ಸಭಾ ಮಂಟಪಕ್ಕೆ ಬಂದದ್ದೇ ಶಿಕ್ಷಕರು ಮಾತನ್ನು ಪ್ರಾರಂಭಿಸಿದರು. ಅವರು ನೋಡಿ ಮಕ್ಕಳೇ ಡಿಸೆಂಬರ್ ತಿಂಗಳಿನ 17ನೇ ತಾರೀಕು ನಾವು ಬೆಳಿಗ್ಗೆ ಆರು ಗಂಟೆಗೆ ಪ್ರವಾಸಕ್ಕೆ ಹೊರಡುತ್ತಿದ್ದೇವೆ ಆದ್ದರಿಂದ ಪ್ರವಾಸಕ್ಕೆ ಹೋಗುವ ಮಕ್ಕಳು ನಿಮ್ಮ ಪಾಲಕರನ್ನು ಶಾಲೆಗೆ ಕರೆತನ್ನಿ ಹೆಸರು ನೋಂದಾಯಿಸಿ ಹಣ ನೀಡುವುದು ಮತ್ತು ಪ್ರವಾಸದ ತಯಾರಿಯನ್ನು ಮಾಡಿಕೊಳ್ಳಿ ಎಂದು ತಿಳಿಸಿದರು. ಆಗ ನಾನು ಮತ್ತು ನನ್ನ ಸ್ನೇಹಿತರು ಕುಣಿದು ಕುಪ್ಪಳಿಸಿದವು. ಅಂದಿನಿಂದಲೇ ನಮ್ಮ ಪ್ರವಾಸಕ್ಕೆ ಜಯವಾಗಲಿ ಎಂಬ ಚೀಟಿಯನ್ನು ಮಾಡಲು ಪ್ರಾರಂಭಿಸಿದೆನು. ಪ್ರವಾಸದ ದಿನ ಹಾಕಿಕೊಳ್ಳಲು ಬೇಕಾದ ಬಟ್ಟೆಯನ್ನು ಆರಿಸತೊಡಗಿದೆನು.

   ಅಂತೂ ಪ್ರವಾಸದ ದಿನ ಬಂದೇ ಬಿಟ್ಟಿತು. ಬೆಳಿಗ್ಗೆ ಬೇಗನೆ ಎದ್ದು ಶೌಚ ಸ್ನಾನಾದಿ ಮುಗಿಸಿ ತಿಂಡಿ ತಿಂದು ಬಟ್ಟೆ ಹಾಕಿ ತಯಾರಾಗಿ ನನ್ನ ತಂದೆ ಮತ್ತು ಅಜ್ಜಿಯೊಂದಿಗೆ ನಮ್ಮ ಶಾಲೆಯನ್ನು ತಲುಪಿದೆನು. ನನ್ನ ಅಜ್ಜಿಯು ನನ್ನ ಜೊತೆ ಪ್ರವಾಸಕ್ಕೆ ಬಂದಿದ್ದರು. ಬಿಸ್ಕೆಟ್ ಮತ್ತು ಕೆಲವು ಹಣ್ಣುಗಳನ್ನು ಜೊತೆಗೆ ಒಯ್ದಿದ್ದೆವು. ಅಷ್ಟು ಹೊತ್ತಿಗೆ ಆಗಲೇ ಕೆಲವರು ಬಂದು ಬಿಟ್ಟಿದ್ದರು. ಸ್ವಲ್ಪ ಸಮಯದ ನಂತರ ಅಲ್ಲಿ ನಮ್ಮ ಪ್ರವಾಸದ ವಾಹನವಾದ ಬಸ್ಸು ಬಂದಿತು. ನಾವೆಲ್ಲರೂ ಬಸ್ಸಿನಲ್ಲಿ ಕುಳಿತುಕೊಂಡೆವು. ನಾವು ಬಸ್ಸಿನಲ್ಲಿ ಕುಳಿತ ನಂತರ ಪಕ್ಕದ ಸೀಟಿನಲ್ಲಿದ್ದ ನನ್ನ ಗೆಳೆಯ ಸುದರ್ಶನನನ್ನು ನಮ್ಮೊಂದಿಗೆ ಕುಳಿತುಕೊಳ್ಳಲು ನಮ್ಮ ಸೀಟಿಗೆ ಕರೆದವು. ಆಗ ಅವನು ಇಲ್ಲ ಎನ್ನದೆ ಬಂದುಬಿಟ್ಟನು. ಬಸ್  ಹೊರಡಲು ಸಿದ್ದವಾಗಿದೆ ಎಲ್ಲರೂ ಸರಿಯಾಗಿ ಕುಳಿತುಕೊಳ್ಳಿ ಎಂದು ಶಿಕ್ಷಕರು ಹೇಳಿದರು. ನಮ್ಮ ಬಸ್ಸು ಹೊಸದಾಗಿದ್ದು ಸುಂದರವಾಗಿ ಅಲಂಕರಿಸಿತ್ತು ಹಾಗೂ ಬಸ್ಸಿನಲ್ಲಿ ಸ್ಪೀಕರ್ ನಿಂದ ಹಾಡು ಸಹ ಹೊರಬಂದಿತು. ಕೆಲವರು ಆ ಹಾಡಿಗೆ ಕುಣಿಯಲು ಪ್ರಾರಂಭಿಸಿದರು.

     ಸಲ್ಪ ಸಮಯದ ನಂತರ ಸಿದ್ದಾಪುರಕ್ಕೆ ತಲುಪಿದಾಗ ಒಂದು ಹೋಟೆಲಿನಲ್ಲಿ ತಿಂಡಿಯನ್ನು ತಿಂದೆವು. ನಾನು ವಿಶಾಲ, ಸುದರ್ಶನ ಮತ್ತು ವಿವೇಕ ಮಸಾಲೆ ದೋಸೆಯನ್ನು ತಿಂದೆವು. ಅಜಿತ, ಶರತ ಮತ್ತು ವಿಲೋಕ ಬನ್ಸ್ ತಿಂದರು. ಎಲ್ಲರೂ ಬೇರೆ ಬೇರೆ ರೀತಿಯ ತಿಂಡಿಗಳನ್ನು ತಿಂದು ಹೊಟ್ಟೆ ತುಂಬಿಸಿಕೊಂಡು ಹೊರಬಂದವು. ಹೊರಗೆ ಒಂದು ಅಕ್ವೇರಿಯಂ ಇತ್ತು. ಆ ಅಕ್ವೇರಿಯಂ ನಲ್ಲಿ ಬಿಳಿ ಕಪ್ಪು ಹಾಗೂ ಇನ್ನಿತರ ಬಣ್ಣ ಬಣ್ಣದ ಮೀನುಗಳಿದ್ದವು. ಅವು ಕುಣಿಯುವುದನ್ನು ನೋಡಿ ಆನಂದಿಸಿದೆವು. ಹೊರಗಿದ್ದ ಅಂಗಡಿಯಲ್ಲಿ ಸುದರ್ಶನನು ಕೆಲವು ಚಾಕ್ಲೇಟ್ ಮತ್ತು ಇನ್ನಿತರ ತಿಂಡಿಗಳನ್ನು ಕೊಂಡನು. ನನಗೂ ಒಂದೆರಡು ಚಾಕ್ಲೇಟ್ ಕೊಟ್ಟನು.

       ನಮ್ಮೆಲ್ಲರ ತಿಂಡಿ ಮುಗಿಸಿ ಹೋಟೆಲಿನಿಂದ ಹೊರಬಂದು  ಬಸ್ಸು ಹತ್ತಿ ಹೊರಟೆವು. ಮತ್ತೆ ಹಾಡಿಗೆ ಕುಣಿಯುತ್ತಾ ಜೋಗ ಜಲಪಾತ ತಲುಪಿದೆವು. ಅಲ್ಲಿ ನಾವು ರಾಜಾ, ರಾಣಿ, ರೋರಲ್ ಮತ್ತು  ರಾಕೆಟ್ ಎಂಬ ನಾಲ್ಕು ಜಲಪಾತಗಳನ್ನು ಕಂಡೆವು. ಅಲ್ಲಿ ಒಂದು ಕಾಮನಬಿಲ್ಲನ್ನು ನೋಡಿದೆವು. ಅದು ತುಂಬಾ ಸುಂದರವಾಗಿತ್ತು.

     ಅಲ್ಲಿಂದ ನಂತರ ನಾವು ಶ್ರೀ ಕ್ಷೇತ್ರ ವರದಳ್ಳಿಗೆ ಹೋದೆವು. ಮೆಟ್ಟಿಲುಗಳನ್ನು ಹತ್ತುತ್ತಾ ದೇವಸ್ಥಾನ ತಲುಪಿದೆವು. ಹತ್ತುವಾಗ ಮೆಟ್ಟಿಲುಗಳನ್ನು ಎಣಿಸಿದೆವು.  ನಾವು ಸುಮಾರು 325 ಮೆಟ್ಟಿಲುಗಳನ್ನು ಹತ್ತಿದ್ದವು. ಅಲ್ಲಿ ನಾವು ಶ್ರೀ ಶ್ರೀಧರ ತೀರ್ಥ ತಲೆಗೆ ಹಾಕಿಕೊಂಡು ದೇವರ ದರ್ಶನ ಪಡೆದೆವು. ನಂತರ ಕೆಳಗಿಳಿದು ಬಂದು ಭೋಜನಾಲಯದಲ್ಲಿ ಅನ್ನಪ್ರಸಾದವನ್ನು ಸ್ವೀಕರಿಸಿದೆವು. ಸ್ವಾದಿಷ್ಟವಾದ ಊಟ ನಮ್ಮ ಹೊಟ್ಟೆ ತುಂಬಿಸಿತ್ತು.

       ಅಲ್ಲಿಂದ ನಾವು ಇಕ್ಕೇರಿಗೆ ಹೋದೆವು.ಅಲ್ಲಿಯ ಅಘೋರೇಶ್ವರ ದೇವಾಲಯವನ್ನು ಕಲ್ಲಿನಿಂದ ಕಟ್ಟಿದ್ದರು. ಸುತ್ತಲಿನ ಪರಿಸರ ನೋಡಲು ತುಂಬಾ ಸುಂದರವಾಗಿತ್ತು. ಅಲ್ಲಲ್ಲಿ ಯಜ್ಞಕುಂಡಗಳನ್ನು ಮಾಡಿದ್ದರು. ಪಕ್ಕದಲ್ಲಿ ಒಂದು ಕೆರೆಯು ಇತ್ತು. ಅಲ್ಲಿ ದೇವರ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿ ಅಲ್ಲಿಂದ ಹೊರಟೆವು.

    ಅನಂತರ ನಾವು ಚಂದ್ರಗುತ್ತಿಗೆ ಹೋದೆವು. ಅಲ್ಲಿಯೂ  ನಾವು ಮೆಟ್ಟಿಲುಗಳನ್ನು ಎಣಿಸುತ್ತಾ ಮೆಟ್ಟಿಲು ಹತ್ತಿದೆವು. ನಾವು ಮೇಲೆ ಹೋಗಿ ತಲುಪಿದೆವು. ನನ್ನ ಅಜ್ಜಿ ಹಾಗೂ ಇನ್ನೂ ಕೆಲವರು ನಿಧಾನಕ್ಕೆ ಮೇಲೆ ಬಂದು ತಲುಪಿದರು. ಅನಂತರ ಅಲ್ಲಿಯ ರೇಣುಕಾಂಬಾ ದೇವಸ್ಥಾನಕ್ಕೆ ಹೋದೆವು. ಒಳಗೆ ಸುಂದರವಾದ ದೇವರ ಮೂರ್ತಿಯನ್ನು ಕಂಡು ನಮಗೆಲ್ಲರಿಗೂ ತುಂಬಾ ಸಂತೋಷವಾಯಿತು. ದೇವಸ್ಥಾನವನ್ನು ಪ್ರದಕ್ಷಿಣೆ ಹಾಕಿ ಪ್ರಸಾದ ತೆಗೆದುಕೊಂಡು ದೇವಸ್ಥಾನದ ಹಿಂದಿನ ಬಾಗಿಲಿನಿಂದ ಹೊರಬಂದೆವು. ಅಲ್ಲಿ ಸ್ವಲ್ಪ ದೂರದವರೆಗೆ ನಡೆದಾಡಲು ಕಲ್ಲುಗಳನ್ನು ಹಾಕಿದ್ದರು. ಅತ್ತಿತ್ತಲ್ಲವೂ ಬೃಹದಾಕಾರದ ಬಂಡೆಗಳೇ ಇದ್ದವು. ಬಂಡಗಳ ಮೇಲೆ ಜೇನುಹುಳುಗಳು ತಮ್ಮ ಗೂಡನ್ನು ಕಟ್ಟಿದ್ದವು. ಆ ಗೂಡಿನಲ್ಲಿ ತುಂಬಾ ಸಿಹಿಯಾದ ಜೇನುತುಪ್ಪವಿದ್ದಂತಿತ್ತು. ಅನಂತರ ನಮ್ಮ ಶಾಲೆಯ ಅಧ್ಯಕ್ಷರೊಂದಿಗೆ ನಾವೆಲ್ಲರೂ ಆ ಕಲ್ಲಿನ ಹತ್ತಿರ ಹೋಗಲು ಇರುವ ದಾರಿಯ ಬಳಿ ಬಂದೆವು. ದಾರಿ ತುಂಬಾ ಚಿಕ್ಕದಾಗಿತ್ತು ಮತ್ತು ತುಂಬಾ ಏರಿಳಿತವಿತ್ತು. ಪಾಲಕರೆಲ್ಲರೂ ತಾವು ಬರುವುದಿಲ್ಲವೆಂದು ಕೆಳಗೆ ನಿಂತರು. ನಾವು ಸ್ವಲ್ಪ ದೂರ ಸಾಗಿದ ಮೇಲೆ ಕೆಲವರು ಆ ರಸ್ತೆ ಎರಡು ಕಿಲೋಮೀಟರ್ ವರೆಗೆ ಇದೆ ಎನ್ನುತ್ತಾ ಕೆಳಗಿಳಿಯುವುದನ್ನು ನೋಡಿ ನಾವು ಕೆಳಗೆ ಇಳಿಯಲು ಪ್ರಾರಂಭಿಸಿದವು. ನಾವು ಅಷ್ಟು ಬೇಗ ಕೆಳಗೆ ಇಳಿದು ಬಂದದ್ದನ್ನು ಕಂಡು ಪಾಲಕರು ಆಶ್ಚರ್ಯಪಟ್ಟರು. ನಾವು ಹೋದಲ್ಲೆಲ್ಲ ಪ್ರವಾಸಕ್ಕೆ ಹೋದ ನೆನಪಿಗಾಗಿ ಫೋಟೋಗಳನ್ನು ಮೊಬೈಲ್ಗಳಲ್ಲಿ ಹೊಡೆದುಕೊಂಡಿದ್ದೆವು.  ಇಲ್ಲೂ ಸಹ ದೇವಸ್ಥಾನಗಳ ಫೋಟೋಗಳೊಂದಿಗೆ ನಮ್ಮೆಲ್ಲರ ಒಂದು ಗ್ರೂಪ್ ಫೋಟೋ ತೆಗೆದುಕೊಂಡೆವು.

   ನಂತರ ನಾವು ನನ್ನ ಸ್ನೇಹಿತ ಅಜಿತನ ಹುಟ್ಟುಹಬ್ಬವನ್ನು ಅಲ್ಲಿಯೇ ಆಚರಿಸಿದವು ಅವನ ಹುಟ್ಟುಹಬ್ಬಕ್ಕೆ ನಾವೆಲ್ಲರೂ ಶುಭಾಶಯ ಕೋರಿದೆವು. ಹುಟ್ಟುಹಬ್ಬಕ್ಕಾಗಿ ಅಜಿತನು ನಮ್ಮೆಲ್ಲರಿಗೆ ಕೇಕ್, ಲಾಡು, ಖಾರಗಳನ್ನು ಕೊಟ್ಟನು. ಅದನ್ನು ತಿಂದು ಮುಗಿಸಿ ಬಸ್ ಅನ್ನು ಏರಿದೆವು.  ಬಸ್ ಹೊರಟಿತು.  ನಮಗಾಗಿ ಪಾಲಕರಾದ ರವಿ ನಾಯ್ಕರವರು ಬಸ್ಸಿನಲ್ಲಿ ತಿನ್ನಲು ಕಿತ್ತಲೆ ಹಣ್ಣಿನ ವ್ಯವಸ್ಥೆ ಮಾಡಿದ್ದರು ನಾವೆಲ್ಲರೂ ಅದನ್ನು ತಿನ್ನುತ್ತಾ ಬಸ್ಸಿನಲ್ಲಿ ಹಾಡುತ್ತಾ ಕುಣಿಯುತ್ತ ಸಾಗಿದೆವು.

     ಅನಂತರ ನಾವು ಎಲ್ಲರೂ ಬನವಾಸಿಯನ್ನು ಹೋಗಿ ತಲುಪಿದೆವು. ಅಲ್ಲಿ ತುಂಬಾ ಸುಂದರವಾದ ದೊಡ್ಡದಾದ ದ್ವಾರ ಬಾಗಿಲೊಂದಿತ್ತು. ನಾವು ಆದ್ವಾರದ ಮೂಲಕ ಒಳಗೆ ಬಂದೆವು. ಅಲ್ಲಿ ಒಂದು ಎತ್ತರವಾದ ಶಿಲಾ ಸ್ತಂಭವಿತ್ತು. ಆ ಸ್ತಂಭದ ಮೇಲೆ ಒಂದು ಸಿಂಹ ಕುಳಿತಂತೆ ಕೆತ್ತನೆ ಮಾಡಿದ್ದರು. ನಾವು ದೇವಸ್ಥಾನವನ್ನು ಪ್ರವೇಶಿಸಿ ಅಲ್ಲಿ ಶ್ರೀ ಮಧುಕೇಶ್ವರ ದೇವರ ದರ್ಶನ ಪಡೆದು ದೇವಸ್ಥಾನದ ಕಂಬಗಳನ್ನು ನೋಡಿ ಆಶ್ಚರ್ಯ ಪಟ್ಟೆವು. ಅಲ್ಲಿ ದೊಡ್ಡದಾದ ನಂದಿಯ ವಿಗ್ರಹವಿತ್ತು. ದೇವಸ್ಥಾನದಲ್ಲಿ ನರ್ತಕೀಯರು ನಾಟ್ಯ ವಾಡುವ ಜಾಗವು ಇತ್ತು. ಈ ದೇವಸ್ಥಾನ ಕದಂಬರ ಕಾಲದಲ್ಲಿ ನೀರ್ಮಿತವಾಗಿದ್ದೆಂದು ನಮ್ಮ ಶಿಕ್ಷಕರು ತಿಳಿಸಿದರು. ಬನವಾಸಿಯು ಕದಂಬರ ರಾಜಧಾನಿಯಾಗಿತ್ತು ಎಂದು ನಮ್ಮ ಪಾಠದಲ್ಲಿ ಬಂದಿತ್ತು. ಪಕ್ಕದಲ್ಲಿ ಪಾರ್ವತಿಯ ದೇವಸ್ಥಾನವು ಇತ್ತು. ನಾನು ಹಿಂದೆಯೂ ಒಂದು ಬಾರಿ ಬನವಾಸಿಗೆ ಹೋಗಿದ್ದೆ ಆಗ ನಾನು ಬನವಾಸಿಯಲ್ಲಿದ್ದ ಪರಶುರಾಮರ ವಿಗ್ರಹವನ್ನು ನೋಡಿರಲಿಲ್ಲ ಈ ಬಾರಿ ನೋಡಿದ್ದೇನೆ. ಬನವಾಸಿಯಲ್ಲಿ ಕಲ್ಲಿನ ದೇವಾಲಯದಲ್ಲಿ ಕಾಲ ಕಳೆದದ್ದು ನನಗೆ ತುಂಬಾ ಸಂತೋಷವಾಯಿತು.

  ಅಷ್ಟೊತ್ತಿಗೆ ಕತ್ತಲಾಗುತ್ತಾ ಬಂತು ಬಸ್ಸಿಗೆ ಹಿಂತುರುಗಿ ನಾವು ಶಿರಸಿಯ ಕಡೆಗೆ ಪ್ರಯಾಣ ಬೆಳೆಸಿದವು. ಸ್ವಲ್ಪ ಹೊತ್ತಿನ ನಂತರ ಶಿರಸಿಯ ಮಾರಿಕಾಂಬಾ ದೇವಸ್ಥಾನ ತಲುಪಿದೆವು. ನಾವು ದೇವಸ್ಥಾನದೊಳಗೆ ಪ್ರವೇಶಿಸಿ ಶ್ರೀ ಮಾರಿಕಾಂಬಾ ದೇವಿಯ ದರ್ಶನ ಪಡೆದೆವು. ದೇವಸ್ಥಾನದಲ್ಲಿ ದೊಡ್ಡದಾದ ಸ್ಟೇಜ್ ಇತ್ತು ಆ ದಿನ ಅಲ್ಲಿ ದೀಪೋತ್ಸವವೂ ಇತ್ತು. ದೀಪಗಳ ಸಾಲು ಕಣ್ಣಿಗೆ ಮುದ ನೀಡಿದವು.

      ರಾತ್ರಿಯಾಗಿದ್ದರಿಂದ ಎಲ್ಲರಿಗೂ ಹಸಿವೆಯಾಗಿತ್ತು. ನಾವು ಶಿರಸಿಯ ಸಾಮ್ರಾಟ್ ಹೋಟೆಲ್ ಗೆ ಊಟಕ್ಕಾಗಿ ಹೋದೆವು. ಅಲ್ಲಿ ನಾನು ಅಜ್ಜಿ,ನಾಗರಾಜ ಮತ್ತು  ಸಾಕ್ಷಿತ್ ಒಂದು ಟೇಬಲ್ ಗೆ ಕುಳಿತೆವು. ರಾತ್ರಿ ಊಟದಲ್ಲಿ ಚಪಾತಿ ಊಟ ಮತ್ತು ಪೂರಿ ಊಟವಿತ್ತು. ನಾನು ಪೂರಿ ಊಟವನ್ನು ಹೇಳಿದೆ ಆಗಲೇ ಸಾಕ್ಷಿತನು ತನಗೂ ಪೂರಿ ಊಟವೇ ಇರಲಿ ಎಂದನು. ನನ್ನ ಅಜ್ಜಿ ಮತ್ತು ನಾಗರಾಜ ಚಪಾತಿ ಊಟ ತೆಗೆದುಕೊಂಡರು. ಊಟದಲ್ಲಿ ಪೂರಿ ಜೊತೆಗೆ ಇನ್ನೂ ಹಲವು ರೀತಿಯ ಪದಾರ್ಥಗಳಿದ್ದವು ಒಂದು ಬೌಲ್ ಅನ್ನವು ಇತ್ತು. ಊಟ ಮುಗಿಸಿ ನಾವು ಬಸ್ ಹತ್ತಿದೆವು. ಬಸ್ಸಿನಲ್ಲಿ ಮಕ್ಕಳು ಹಾಗೂ ಶಿಕ್ಷಕರು ಅಂತ್ಯಾಕ್ಷರಿ ಆಟವನ್ನು ಆಡುತ್ತಿದ್ದರು ನಾನು ಆಟದಲ್ಲಿ ಸೇರಿಕೊಂಡೆ. ನಮ್ಮ ಬಸ್ಸು ಯಲ್ಲಾಪುರಕ್ಕೆ ಹೊರಟಿತ್ತು.  ಶಾಲೆ ತಲುಪಿದ ನಂತರ ಬಹಳಷ್ಟು ಜನ ಅಲ್ಲಿಯೇ ಹೇಳಿದ್ದು ತಮ್ಮ ತಮ್ಮ ಮನೆಗಳಿಗೆ ಪಾಲಕರೊಂದಿಗೆ ತೆರಳಿದರು. ಆದರೆ ನಾವು ಅದೇ ಬಸ್ಸಿನಲ್ಲಿ ಯಲ್ಲಾಪುರದವರೆಗೂ ಬಂದು ಮನೆ ಸೇರಿಕೊಂಡೆವು. ಮನೆಯಲ್ಲಿ ಅಪ್ಪ ಅಮ್ಮನಿಗೆ ಪ್ರವಾಸದ ಕಥೆಯನ್ನು ಚಿಕ್ಕದಾಗಿ ಹೇಳಿ ನಿದ್ರಿಸಿದೆವು.

       ಒಟ್ಟಿನಲ್ಲಿ ನಮ್ಮ ಈ ವರ್ಷದ ಶಾಲಾ ಪ್ರವಾಸವು ಖುಷಿ ಕೊಟ್ಟಿತು. ನಮ್ಮ ನೆನಪಿನ ಬುತ್ತಿಯಲ್ಲಿ ಈ ವರ್ಷದ ಪ್ರವಾಸ ಸೇರಿಕೊಂಡಿತ್ತು. ನಂತರ ಶಾಲೆಗೆ ಹೋದ ದಿನವೂ ನಮ್ಮ ಸ್ನೇಹಿತರೊಡನೆ ಪ್ರವಾಸದಲ್ಲಿ ನಡೆದ ಸುದ್ದಿಗಳನ್ನು ಹೇಳುತ್ತಾ ನಾವು ಖುಷಿ ಪಟ್ಟೆವು.

   

 

ಪಾರ್ಥ ರಾಘವೇಂದ್ರ ಭಟ್ಟ

 6ನೇ ತರಗತಿ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸವಣಗೇರಿ ಯಲ್ಲಾಪುರ